ಒಂದು ತಿಂಗಳೊಳಗೆ ಕೇಂದ್ರದ ಅನುದಾನ: ಡಿವಿ

ಉಡುಪಿ: ರಾಜ್ಯದಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಪರಿಹಾರಾರ್ಥ ಸುಮಾರು ಒಂದು ತಿಂಗಳೊಳಗೆ ಕೇಂದ್ರ ಸರಕಾರದ ಅನುದಾನ ಬಿಡುಗಡೆಗೊಳ್ಳಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

“ಉದಯವಾಣಿ’ ಕಚೇರಿಗೆ ಶನಿವಾರ ಭೇಟಿ ಯಿತ್ತ ಬಳಿಕ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು.

 ರಾಜ್ಯದಲ್ಲಿ ಇಷ್ಟೊಂದು ಪ್ರಾಕೃತಿಕ ವಿಕೋಪ ಸಂಭವಿಸಿದರೂ ಕೇಂದ್ರದಿಂದ ಅನುದಾನ ಇನ್ನೂ ಬಂದಿಲ್ಲವಲ್ಲ?
ಕರ್ನಾಟಕ ಸಹಿತ ಎಂಟು ರಾಜ್ಯಗಳಲ್ಲಿ ಹಿಂದೆಂದೂ ಕೇಳರಿಯದಂಥ ಅತಿವೃಷ್ಟಿಯಾಗಿ ಹಾನಿ ಸಂಭವಿಸಿದೆ. ಕೇಂದ್ರ ಗೃಹ ಸಚಿವರು ಬಂದು ಪರಿಶೀಲಿಸಿದ್ದಾರೆ. ಎನ್‌ಡಿಆರ್‌ಎಫ್ ಮೊತ್ತದಲ್ಲಿ 380 ಕೋ.ರೂ.ಗಳನ್ನು ತತ್‌ಕ್ಷಣ ಬಿಡುಗಡೆ ಮಾಡಲಾಗಿದೆ. ಈಗ ತುರ್ತಾಗಿ ಆಗಬೇಕಾದದ್ದು ಜನರ ರಕ್ಷಣೆ, ಪರಿಹಾರ ಕೇಂದ್ರ ವ್ಯವಸ್ಥೆ. ಇದಕ್ಕೆ ಈ ಮೊತ್ತ ನೀಡಲಾಗಿದೆ. ಮಳೆ ನಿಂತ ಬಳಿಕವೇ ಮನೆ ನಿರ್ಮಾಣ, ಉದ್ದಿಮೆಗಳ ಸ್ಥಾಪನೆ, ಕಟ್ಟಡ ನಿರ್ಮಾಣ ನಡೆಯುತ್ತದೆ. ಇದಕ್ಕೆ ಬೇಕಾದ ಮೊತ್ತ ಇನ್ನೊಂದು ತಿಂಗಳಲ್ಲಿ ಬಿಡುಗಡೆಯಾಗಲಿದೆ. ಆ ಕೆಲಸಗಳಿಗೆ ಹಣದ ಕೊರತೆಯಾಗದು. ಹಿಂದಿನ ಯಾವ ಸರಕಾರ ಗಳೂ ಮಧ್ಯಾಂತರ ಪರಿಹಾರವನ್ನು ಒಂದು ತಿಂಗಳು ಮುನ್ನ ಕೊಟ್ಟದ್ದಿಲ್ಲ, ಕೆಲವು ಸಂದರ್ಭ 3-4-8 ತಿಂಗಳು ಆದದ್ದಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಅಪಾರ ಹಾನಿಯಾಗಿದ್ದರೂ ಕೇಂದ್ರದ ತಂಡ ಪರಿಶೀಲನೆ ನಡೆಸಲಿಲ್ಲ?
ನಾನು ಮೈಸೂರು, ಕೊಡಗು, ದ.ಕ., ಚಿಕ್ಕಮಗಳೂರು ಮೊದಲಾದ ಐದು ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದ್ದೇನೆ. ಇಲ್ಲಿಗೂ ಬರಬೇಕಿತ್ತು. ನಾನು ಬರುವ ದಿನ ಶಾಸಕರು ಬೇರೆ ಕೆಲಸಗಳನ್ನು ಇರಿಸಿಕೊಂಡಿದ್ದರು. ಇಲ್ಲಿ ಆದ ಹಾನಿಗಳ ಬಗ್ಗೆ ವರದಿ ತರಿಸಿಕೊಂಡಿದ್ದೇನೆ. ಆ ಸಂದರ್ಭ ಬರಲಾಗಲಿಲ್ಲವಾದರೂ ಕೆಲಸ ಕಾರ್ಯ, ಪರಿಹಾರ ಕಾಮಗಾರಿಗಳು ಸುಸೂತ್ರವಾಗಿ ನಡೆಯುತ್ತಿವೆ.

ರಸಗೊಬ್ಬರ ವಿತರಣೆಯಲ್ಲಿ ತಯಾರಿಕಾ ಕಂಪೆನಿಗಳಿಂದ ಅನ್ಯಾಯವಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆಯಲ್ಲ?
ಹೀಗಾಗಲು ಸಾಧ್ಯವಿಲ್ಲ. ಕಾರ್ಖಾನೆಗಳಿಂದ ನೇರವಾಗಿ ರಾಜ್ಯದ ಕೇಂದ್ರಗಳಿಗೆ ಪೂರೈಕೆಯಾಗುತ್ತದೆ. ಪ್ರತಿ ರಾಜ್ಯದಿಂದ ಬೇಡಿಕೆ ಪಟ್ಟಿ ಕಳುಹಿಸಿದಂತೆ ಆಯಾ ಡೀಲರುಗಳು ಪೂರೈಸಬೇಕು. ಐದಾರು ವರ್ಷಗಳಿಂದ ರಸಗೊಬ್ಬರದ ಕೊರತೆಯಾಗಿಲ್ಲ. ರಾಜ್ಯಗಳಿಗೆ ಬರುವಾಗಲೂ, ಡೀಲರು ಗಳಿಗೆ ಹೋಗುವಾಗಲೂ ಪರೀಕ್ಷೆ ನಡೆಯುತ್ತದೆ. ತಪ್ಪಿದ್ದರೆ ಪೂರೈಕೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ.

ಪೋಸ್‌ ಯಂತ್ರದಿಂದ ಸಾಮಾನ್ಯರಿಗೆ ತೊಂದರೆಯಾಗುತ್ತಿದೆಯಲ್ಲ?
ಪೋಸ್‌ (ಪಿಒಎಸ್‌) ಯಂತ್ರ ಬರುವ ಮೊದಲು ಸರಕಾರದಿಂದ ಬರುವ ಸಬ್ಸಿಡಿಯಲ್ಲಿ ಅವ್ಯವಹಾರ ವಾಗುತ್ತಿತ್ತು. ಈಗ ನಾವು 80,000 ಕೋ.ರೂ. ಸಬ್ಸಿಡಿ ಕೊಡುತ್ತಿದ್ದೇವೆ. ಇದು ಈಗ ರಸೀತಿ ಮಾಡಿದ ರೈತರಿಗೆ ನೇರವಾಗಿ ಸಿಗುತ್ತಿದೆ. ಕೆಲವೆಡೆ ಅಂತರಜಾಲ ಸಮಸ್ಯೆಯಿಂದ ತೊಂದರೆಯಾಗುತ್ತಿದೆ ನಿಜ. ಅಂಥ ಪ್ರದೇಶಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ನೇರ ಸಬ್ಸಿಡಿ, ಸಾವಯವ ಗೊಬ್ಬರ ಪ್ರಸ್ತಾವ…
ನಾವು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. ವೆಬ್‌ಸೈಟ್‌ನಲ್ಲಿ ಡ್ಯಾಶ್‌ಬೋರ್ಡ್‌ ಸೃಷ್ಟಿಸಿ ಅದರಲ್ಲಿ ಸ್ಟಾಕ್‌, ದರ ಇತ್ಯಾದಿ ಎಲ್ಲ ಮಾಹಿತಿಗಳೂ ದೊರಕುವಂತೆ ಮಾಡುತ್ತಿದ್ದೇವೆ. ವ್ಯಾಲೆಟ್‌ ಮೂಲಕ ರೈತರಿಗೆ ನೇರವಾಗಿ ಸಬ್ಸಿಡಿ ಸಿಗುವಂತೆ (ಡಿಬಿಟಿ) ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಯಾವ್ಯಾವ ರೈತರು ಯಾವ್ಯಾವ ಬೆಳೆ ಬೆಳೆಯುತ್ತಾರೆ, ಅವರಿಗೆ ಬೇಕಾಗುವ ರಸಗೊಬ್ಬರ ಯಾವುದು ಇತ್ಯಾದಿ ಮಾಹಿತಿಗಳನ್ನು ರಾಜ್ಯ ಸರಕಾರಗಳಿಂದ ತರಿಸಿಕೊಂಡು ಸುಲಭವಾಗಿ ರೈತರಿಗೆ ರಸಗೊಬ್ಬರ ದೊರಕುವಂತೆ ಮಾಡುತ್ತೇವೆ. ಸಾವಯವ ಗೊಬ್ಬರ ಒದಗಿಸುವ ಪ್ರಯತ್ನವೂ ಜಾರಿಯಲ್ಲಿದೆ.

ಪಿಒಕೆ- ರಾಜತಾಂತ್ರಿಕ ಇಲ್ಲವೆ ಯುದ್ಧ ಮಾರ್ಗ
ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ರಕ್ಷಣಾ ಸಚಿವರು ಹೇಳಿದ್ದನ್ನು ಸಾಧಿಸುವ ಮಾರ್ಗ ಏನು?
ಹಿಂದೆ ಜವಾಹರಲಾಲ್‌ ನೆಹರು ಅವರು ಮಾಡಿದ ತಪ್ಪಿನಿಂದ ಕಾಶ್ಮೀರ ಕೈತಪ್ಪಿತು. ಆಗ ವಿಶ್ವಸಂಸ್ಥೆಗೆ ಪ್ರಕರಣವನ್ನು ಕೊಂಡೊಯ್ಯಲಾಯಿತು. ಪಿಒಕೆ ಪ್ರದೇಶ ಭಾರತದ್ದು ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವರೇ ಹೇಳಿರುವುದನ್ನು ನೋಡಿ. ಭಯೋತ್ಪಾದನೆಯ ಮುಖವನ್ನು ಜಗತ್ತಿಗೆ ತೆರೆದಿಟ್ಟ ನಮ್ಮ ವಿದೇಶಾಂಗ ನೀತಿಯ ಕ್ರಮದಿಂದ ವಿಶ್ವ ಸಂಸ್ಥೆಯೇ ಘೋಷಿಸಿದರೆ ಸಾಕಾಗುತ್ತದೆಯಲ್ಲ? ಯುದ್ಧವನ್ನೇ ಮಾಡಬೇಕಾಗಿಲ್ಲ. ಇಷ್ಟಾಗಿಯೂ ಅನಿವಾರ್ಯವಾದರೆ ಪಿಒಕೆ ನಮ್ಮ ಸೊತ್ತು. ನಾವು ಯುದ್ಧವನ್ನೂ ಮಾಡಬಹುದು. ಒಟ್ಟಾರೆ ಪಿಒಕೆ ನಮ್ಮ ವಶಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ.

ಮಂಗಳೂರಿಗೆ ರೈಲ್ವೇ ವಲಯ ಇಲ್ಲ
ಮಂಗಳೂರು ರೈಲ್ವೇ ವಲಯಕ್ಕೆ ಬೇಕಾದಷ್ಟು ವ್ಯಾಪ್ತಿ ಇಲ್ಲ. ಅತ್ತ ಪಾಲಾ^ಟ್‌ ವಲಯ, ಇತ್ತ ಕೊಂಕಣ ರೈಲ್ವೇ ಹೀಗೆ ನೂರು ಕಿ.ಮೀ. ವ್ಯಾಪ್ತಿಗೆ ಪ್ರತ್ಯೇಕ ವಲಯ ಅಸಾಧ್ಯ. ಕೊಂಕಣ ರೈಲ್ವೇ ನಿಗಮ ವಿಭಜಿಸಲಾಗದು. ಆದ್ದರಿಂದ ವಲಯ ಕಚೇರಿಯನ್ನು ಮಂಗಳೂರಿನಲ್ಲಿ ತೆರೆದು, ಪೂರ್ಣ ಅಧಿಕಾರ ನೀಡಲು ಕ್ರಮ ಕೈಗೊಳ್ಳಲಾಗು ತ್ತಿದೆ. ಇದನ್ನು ನೈಋತ್ಯ ವಲಯಕ್ಕೆ ಸೇರಿಸುವ ಪ್ರಸ್ತಾವವೂ ಇಲ್ಲ ಎಂದು ಡಿವಿಎಸ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


Leave a Reply

Your email address will not be published. Required fields are marked *