ಉಪ ಚುನಾವಣೆ ಬೆನ್ನಲ್ಲೇ ಮಂತ್ರಿಗಿರಿ ಲಾಭಿ: ಪೈಪೋಟಿಯಲ್ಲಿ ಮುರಗೇಶ್ ನಿರಾಣಿ

ಬಾಗಲಕೋಟೆ: ರಾಜ್ಯದ ೧೫ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮುಗಿದಿದೆ. ಫಲಿತಾಂಶದ ಏನಾಗಲಿದೆ ಎನ್ನುವ ಕಾತರ ಹೆಚ್ಚಿತ್ತಿರುವ ಮಧ್ಯೆಯೇ ಬಿಜೆಪಿಯಲ್ಲಿ ಮಂತ್ರಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಪೈಪೋಟಿ ಆರಂಭಗೊಂಡಿದೆ.

ಉಪಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಪಡೆದುಕೊಂಡಲ್ಲಿ ಮಂತ್ರಿಸ್ಥಾನಕ್ಕಾಗಿನ ಪೈಪೋಟಿ ಇನ್ನಷ್ಟು ತೀವ್ರಗೊಳ್ಳಲಿದೆ. ಈ ಪೈಪೋಟಿಯಲ್ಲಿ ಜಿಲ್ಲೆಗೆ ಇನ್ನೊಂದು ಮಂತ್ರಿ ಸ್ಥಾನ ಲಭಿಸಬಲ್ಲದೆ ಎನ್ನುವ ಚರ್ಚೆಗಳು ಶುರವಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮಂತ್ರಿಸ್ಥಾನಕ್ಕಾಗಿ ಕೊನೆಗಳಿಗೆವರೆಗೂ ಪ್ರಯತ್ನಿಸಿದವರು ಬೀಳಗಿ ಶಾಸಕ ಮುರಗೇಶ ನಿರಾಣಿ. ನಿರಾಣಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡವರು. ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತರಲ್ಲಿ ಒಬ್ಬರು ಎನ್ನುವುದು ನಿರ್ವಿವಾದ. ಆಪ್ತತೆ ಕಾರಣಕ್ಕಾಗಿಯೇ ಅವರು ಕೊನೆ ಗಳಿಗೆಯಲ್ಲಿ ಮಂತ್ರಿಸ್ಥಾನದಿAದ ವಂಚಿತರಾದವರು. ಹಾಗಾಗಿ ಈ ಬಾರಿ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹದಿನೈದು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಷ್ಟು ಜನ ಅನರ್ಹ ಶಾಸಕರು ಆಯ್ಕೆಗೊಳ್ಳಲಿದ್ದಾರೆ ಎನ್ನುವುದರ ಮೇಲೆ ಸಂಪುಟಕ್ಕೆ ಯರ‍್ಯಾರು ಎನ್ನುವುದು ನಿರ್ಧಾರವಾಗಲಿದೆ. ಈಗಾಗಲೇ ಜಿಲ್ಲೆಗೆ ಉಪಮುಖ್ಯಮಂತ್ರಿ ಸ್ಥಾನ ಲಭಿಸಿದ್ದು, ಡಿಸಿಎಂ ಕಾರಜೋಳರ ಜತೆಗೆ ಇನ್ನೊಬ್ಬರಿಗೆ ಎಷ್ಟರ ಮಟ್ಟಿಗೆ ಅವಕಾಶ ಸಿಗಲಿದೆ ಎನ್ನುವ ಅನುಮಾನದ ಮಧ್ಯೆಯೇ ಮುರಗೇಶ ನಿರಾಣಿ ಅವರಿಗೆ ಅದೃಷ್ಟ ಖುಲಾಯಿಸಲಿದೆ ಎನ್ನುವ ಲೆಕ್ಕಾಚಾರಗಳು ಜೋರಾಗಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಸ್ಥಾನಗಳ ಪೈಕಿ ಐದು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಹುತೇಕ ಎಲ್ಲರೂ ಮೂರನೇ ಬಾರಿಗೆ ಆಯ್ಕೆಗೊಂಡವರೆ ಇದ್ದಾರೆ. ಮುರಗೇಶ ನಿರಾಣಿ ಅವರ ಜತೆಗೆ ಮಂತ್ರಿಸ್ಥಾನಕ್ಕಾಗಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹೆಸರೂ ಮುಂಚೂಣಿಯಲ್ಲಿದೆ. ಅವರು ಮಂತ್ರಿಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಒಟ್ಟಾರೆ ಜಿಲ್ಲೆಗೆ ಇನ್ನೊಂದು ಮಂತ್ರಿಸ್ಥಾನ ಲಭ್ಯವಾಗಲಿದೆ ಎನ್ನುವ ಆಶಾ ಭಾವನೆ ಬಿಜೆಪಿಗರಲ್ಲಿದೆ.

ಒಂದೊಮ್ಮೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ವ್ಯತಿರಿಕ್ತ ಫಲಿತಾಂಶವೇನಾದರೂ ಬಂದಲ್ಲಿ, ಕಾರಜೋಳರ ಉಸ್ತುವಾರಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದೇ ಹೋದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುವ ಸಾಧ್ಯತೆಗಳನ್ನು ಅಲ್ಲ ಗಳೆಯುವಂತಿಲ್ಲ. ಡಿಸಿಎಂ ಕಾರಜೋಳ ಅವರ ಗದ್ದುಗೆಗೂ ಕುತ್ತು ತಪ್ಪಿದ್ದಲ್ಲ. ಅವರ ಉಸ್ತುವಾರಿ ಕ್ಷೇತ್ರಗಳು ಸೇರಿದಂತೆ ಬಿಜೆಪಿ ೬ ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದಲ್ಲಿ ಅಷ್ಟರ ಮಟ್ಟಿಗೆ ಅವರ ಸ್ಥಾನ ಭದ್ರ ಎನ್ನುವುದು ನಿಚ್ಚಳ.

ಏನೇ ಬೆಳವಣಿಗೆಗಳು ನಡೆದರೂ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳಲ್ಲಿ ಬಂದಲ್ಲಿ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಗೆ ಇನ್ನೊಂದು ಮಂತ್ರಿಸ್ಥಾನದ ಅವಕಾಶಗಳು ದಟ್ಟವಾಗಿವೆ. ಈ ಅವಕಾಶ ಎಷ್ಟು ಜನ ಅನರ್ಹ ಶಾಸಕರು ಗೆಲ್ಲಲಿದ್ದಾರೆ ಎನ್ನುವುದನ್ನು ಅವಲಂಬಿಸಿದೆ.


Leave a Reply

Your email address will not be published. Required fields are marked *